ISSN (Print) - 0012-9976 | ISSN (Online) - 2349-8846

ಬಲವಂತವಾಗಿ ತುರಕಲ್ಪಡುತ್ತಿರುವ ಆಧಾರ್

ಕಲ್ಯಾಣರಾಜ್ಯಕ್ಕೂ ಮತ್ತು ಬೇಹುಗಾರಿಕೆ ಮಾಡುವ ಪ್ರಭುತ್ವಗಳಿಗೂ ನಡುವಿನ ವ್ಯತ್ಯಾಸ ವೇಗವಾಗಿ ಕಣ್ಮರೆಯಾಗುತ್ತಿದೆ

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಆಹಾರದ ಹಕ್ಕನ್ನು ಪಡೆದುಕೊಳ್ಳಲು ಶರತ್ತನ್ನು ವಿಧಿಸುವುದು ಯಾವುದೇ ಕಲ್ಯಾಣರಾಜ್ಯದ ಲಕ್ಷಣವಲ್ಲ. ಮಧ್ಯಾಹ್ನದ ಬಿಸಿಯೂಟದ ಸೌಲಭ್ಯವನ್ನು ಪಡೆದುಕೊಳ್ಳಲೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯಮಾಡಿ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸೂಚನೆಯು ಸಹಜವಾದ ಮತ್ತು ನ್ಯಾಯಸಮ್ಮತ ಆಕ್ರೋಶವನ್ನು ಹುಟ್ಟಿಹಾಕಿದೆ. ಏಕೆಂದರೆ ಕೆಲವು ರಾಜ್ಯಗಳಲ್ಲಿ ಈ ಹಿಂದೆ ಪಡಿತರ ಪದ್ಧತಿಯ ಸೌಲಭ್ಯವನ್ನು ಪಡೆದುಕೊಳ್ಳಲೂ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿದ್ದರಿಂದ ಉಂಟಾದ ಕೋಲಾಹಲವು ಇನ್ನಿದುವರೆಗೂ ತಣ್ಣಗಾಗಿಲ್ಲ. ಹಾಗಿದ್ದರೂ ಮುಂದುವರೆದಿರುವ ಸರ್ಕಾರದ ಈ ನಿರ್ಧಾರ ಸಾಧಾರಣವಾದದ್ದಲ್ಲ. ಗುಜರಾತ್, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ಹಾಗೂ ಮತ್ತಿತರ ರಾಜ್ಯಗಳಿಂದ ಬರುತ್ತಿರುವ ವರದಿಗಳು ಆಧಾರ್ ದಾಖಲೆಗಳಲ್ಲಿ ಮತ್ತದರ ಧೃಢೀಕರಣದ ಪ್ರಕ್ರಿಯೆಯಲ್ಲಿನ ಸಮಸ್ಯೆಗಳು ಮತ್ತು ತಂತ್ರಜ್ನಾನ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿಗಳಿಂದ ನೈಜ ಫಲಾನುಭವಿಗಳು ಹೇಗೆ ಹೊರಗುಳಿಸಲ್ಪಟ್ಟಿದ್ದಾರೆಂಬ ದಾರುಣ ಸತ್ಯಗಳನ್ನು ವಿವರಿಸುತ್ತವೆ. ಈ ಅನುಭವಗಳು ಪಡಿತರ ವಿತರಣೆಯಲ್ಲಿ ಎದುರಾಗುತ್ತಿರುವ ಭ್ರಷ್ಟಾಚಾರ ಮತ್ತು ಅದಕ್ಷತೆಗಳನ್ನು ನಿವಾರಣೆಗೆ ತಂತ್ರಜ್ನಾನವೊಂದೇ ದಿವ್ಯೌಷಧಿಯಾಗಲಾರದೆಂಬುದನ್ನೂ ಮತ್ತು ತಂತ್ರಜ್ನಾನವೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರರಾದವರನ್ನು ಹೊರಗಟ್ಟುವ ಖಾತರಿ ವಿಧಾನವಾಗಿಬಿಡಬಹುದೆಂಬ ಪಾಠವನ್ನು ಸರ್ಕಾರಕ್ಕೆ  ಕಲಿಸಬೇಕಿತ್ತು. 

ಹಾಗಿದ್ದರೂ ಇತ್ತೀಚಿನ ಕೆಲವು ವಾರಗಳಲ್ಲಿ ಹಲವಾರು ಇಲಾಖೆಗಳು ೩೦ಕ್ಕೂ ಹೆಚ್ಚು ಯೋಜನೆಗಳನ್ನು ಈ ಆಧಾರ್ ಬೋಗಿಗೆ ಸೇರಿಸುವುದಾಗಿ ಘೋಷಿಸಿವೆ. ಅದರಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ, ಕಾರ್ಮಿಕರ ವಿಮಾ ನಿಧಿ, ನಿವೃತ್ತಿ ವೇತನ ಮತ್ತು ವಿದ್ಯಾರ್ಥಿ ವೇತನ ಯೋಜನೆಗಳು ಮಾತ್ರವಲ್ಲದೆ ೧೯೮೪ರ ಭೋಪಾಲ್ ಅನಿಲ ಸೋರಿಕೆ ಪೀಡಿತರಿಗೆ ನಿಡಲಾಗುತ್ತಿರುವ  ಪರಿಹಾರದ ಮೊತ್ತವನ್ನು ಪಡೆಯಲೂ ಇತ್ತೀಚೆಗೆ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ. ಅಂತಿಮವಾಗಿ ಜನರಿಗೆ ಒದಗಿಸಲಾಗುತ್ತಿರುವ ಎಲ್ಲಾ ೮೪ ಯೋಜನೆಗಳಿಗೂ ಆಧಾರ್ ಅನ್ನು ಕಡ್ಡಾಯ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಸರ್ಕಾರವು ಏನೇ ಹೇಳಿದರೂ, ಈ ನಿರ್ಧಾರವು ಸಾರ್ವಜನಿಕರು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಆಧಾರ್ ಅನ್ನು ಕಡ್ಡಾಯಗೊಳಿಸಬಾರದೆಂದು ಸುಪ್ರೀಂ ಕೋರ್ಟು ಪದೇ ಪಡೇ ನೀಡುತ್ತಿರುವ ನಿರ್ದೇಶನಗಳಿಗೆ ತದ್ವಿರುದ್ಧವಾಗಿದೆ. ಈ ಪ್ರಕರಣ ಇನ್ನೂ ನ್ಯಾಯಾಲಯದ ಅಧೀನದಲ್ಲೇ ಇದೆ. ಆದರೂ ನ್ಯಾಯಾಲಯದ ಆದೇಶವನ್ನೂ ಪಕ್ಕಕೆ ಸರಿಸಿ ಸರ್ಕಾರವು ತನ್ನ ಇತ್ತೀಚಿನ ಪತ್ರಿಕಾ ಹೇಳಿಕೆಯಲ್ಲಿ ಯಾವುದೇ ವ್ಯಕ್ತಿಗೆ ಇನ್ನೂ ಆಧಾರ್ ಸಂಖ್ಯೆ ದಕ್ಕಿಲ್ಲವಾದರೆ ಅದನ್ನು ಪಡೆದುಕೊಳ್ಳುವವರೆಗೆ ಇನ್ನಿತರ ಪರ್ಯಾಯ ಗುರುತು ಧೃಢೀಕರಣ ಸಾಧನಗಳನ್ನು ಆಧರಿಸಿ ಪ್ರಯೋಜನವನ್ನು ವಿತರಿಸಲಾಗುವುದು ಎಂದು ಘೋಷಿಸಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಎಲ್ಲಾ ರಾಜ್ಯಗಳಿಗೆ ಕಳಿಸಿರುವ ಸೂಚನೆಗಳಲ್ಲೂ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಧಾರ ಕಾರ್ಡ್ ಅತ್ಯಗತ್ಯವೆಂದೂ, ಅದಿಲ್ಲದಿದ್ದಲ್ಲಿ ಸೂಚಿಸಲಾದ ಇತರೆ ಗುರುತು ಧೃಡೀಕರಣ ದಾಖಲೆಗಳನ್ನು ಒಪ್ಪಿಕೊಳ್ಳಲಾಗುವುದೆಂದೂ ಸ್ಪಷ್ಟೀಕರಿಸುತ್ತದೆ. ಆದರೆ ಫಲಾನುಭವಿಗಳು ತಾವು ಆಧಾರ್ ಕಾರ್‍ಡ್ ಪಡೆಯಲು ಮಾಡಿಕೊಂಡಿರುವ ನೊಂದಾವಣಿಯನ್ನು ತೋರಿಸಬೇಕು. ಇದರೊಡನೆ ಆಧಾರ್ ಸಂಖ್ಯೆಯನ್ನು ಪಡೆಯಲು ವಿಧಿಸಿರುವ ಕಟ್ಟುನಿಟ್ಟಿನ ಗಡುವನ್ನು ಗಮನಿಸಿದಾಗ ಆಧಾರ್ ಅನ್ನು ಹೆಚ್ಚೂಕಡಿಮೆ ಕಡ್ಡಾಯ ಮಾಡಿರುವುದು ಸ್ಪಷ್ಟವಾಗುತ್ತದೆ.

ಸರ್ಕಾರವು ಆಧಾರ್ ಅನ್ನು ಸರ್ಕಾರಿ ಯೋಜನೆಗಳಲ್ಲಿ ಸೋರಿಕೆಯನ್ನು ತಡೆಗಟ್ಟುವ, ಪಾರದರ್ಶಕತೆಯನ್ನು ತರುವ, ನಕಲಿ ಫಲಾನುಭವಿಗಳನ್ನು ಹೊರತಳ್ಳಿ, ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ಉಳಿಸುವ ಮಂತ್ರದಂಡವೆಂದು ಬಿಂಬಿಸುತ್ತಿದೆ. ಆದರೆ ಅದು ಹೇಳದೆ ಮರೆಮಾಚುತ್ತಿರುವ ಸತ್ಯ ಸಂಗತಿಯೆಂದರೆ ಈ ಯೋಜನೆಯು ಜನರ ವೈಯಕ್ತಿಕ ಮತ್ತು ಖಾಸಗಿ ವಿಷಯಗಳ ಬಗ್ಗೆ  ಮಾಹಿತಿಯನ್ನು ಸಂಗ್ರಹಿಸುವ ಮತ್ತು ನಿಯಂತ್ರಿಸುವ ಬೃಹತ್ ಸಾಧನವೂ ಆಗಿದೆ. ಇದರಿಂದ ಸರ್ಕಾರವು ಜನರ ಆನ್‌ಲೈನ್ ಚಟುವಟಿಕೆಗಳ ಮತ್ತು ವೈಯಕ್ತಿಕ ಮಾಹಿತಿಗಳ ಡಿಜಿಟಲ್ ದತ್ತಾಂಷಗಳ ಮೇಲೆ ನಿಗಾ ಇರಿಸುತ್ತಾ ದತ್ತಾಂಶ ಬೇಹುಗಾರಿಕೆ (ಡೇಟಾವಲೆನ್ಸ್) ನಡೆಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ಯುದ್ಧದ ನಂತರದಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರವು ಆಧಾರ್ ಯೋಜನೆಯನ್ನು ಒಂದು ಭದ್ರತಾ ಮತ್ತು ಬೇಹುಗಾರಿಕಾ ಯೋಜನೆಯನ್ನಾಗಿಯೇ ಕಲ್ಪಿಸಿಕೊಂಡಿತ್ತು. ಇಂದಿನ ಆಧಾರ್ ಯೋಜನೆಯ ಗುಣಲಕ್ಷಣಗಳು ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಷ್ಟು ಮಾತ್ರವಲ್ಲದೆ ಈ ಸರ್ಕಾರವು ಆಧಾರ್ ಅನ್ನು ಕಡ್ಡಾಯಮಾಡಬಾರದೆಂಬ ಸುಪ್ರೀಂ ಕೋರ್ಟಿನ ಆದೇಶವನ್ನು ಒಂದೆಡೆ ಉಲ್ಲಂಘಿಸುತ್ತಲೇ, ಮತ್ತೊಂದೆಡೆ ನಾಗರಿಕರ ಖಾಸಗಿತನವನ್ನು ರಕ್ಷಿಸುವ ಕಾನೂನನ್ನಾಗಲೀ ಅಥವಾ ಬಯೊಮೆಟ್ರಿಕ್ ದತ್ತಾಂಶಗಳನ್ನು ನಿಯಂತ್ರಣ ಮಾಡುವ ಕಾನುನನ್ನಾಗಲೀ ರೂಪಿಸದೆ ಎಲ್ಲಾ ಸಾಂವಿಧಾನಿಕ ಪದ್ಧತಿ ಮತ್ತು ಎಚ್ಚರಿಕೆಗಳನ್ನು ಪಕ್ಕಕೆ ಸರಿಸಿ ಆಧಾರ್ (ಟಾರ್ಗೆಟೆಡ್ ಡೆಲಿವರಿ ಆಫ್ ಆಫ್ ಫೈನಾನ್ಷಿಯಲ್ ಅಂಡ್ ಅದರ ಸಬ್ಸಿಡೀಸ್, ಬೆನಿಫಿಟ್ಸ್ ಅಂಡ್ ಸರ್ವೀಸಸ್) ಆಕ್ಟ್-೨೦೧೬ (ನಿರ್ದಿಷ್ಟ ವರ್ಗಗಳಿಗೆ ಮಾತ್ರ ಒದಗಿಸುವ ಹಣಕಾಸು ಮತ್ತಿತರ ಸಹಾಯಧನ, ಸೇವೆ ಮತ್ತು ಪ್ರಯೋಜನಗ ಕಾಯಿದೆ-೨೦೧೬)ಅನ್ನು ಒಂದು ಹಣಕಾಸು ಮಸೂದೆಯಾಗಿ (ಯಾವುದೇ ಹಣಕಾಸು ಮಸೂದೆಗೆ ರಾಜ್ಯಸಭೆಯ ಅನುಮೋದನೆ ಅಗತ್ಯವಿರುವುದಿಲ್ಲ- ಅನು) ಜಾರಿಮಾಡಿದೆ.

ಸಾಮಾನ್ಯ ನಾಗರಿಕರನ್ನು ಅತ್ಯಂತ ಕಳವಳಕ್ಕೀಡು ಮಾಡುತ್ತಿರುವ ಸಂಗತಿಯೆಂದರೆ ಅವರ ಖಾಸಗಿ ಬಯೋಮೆಟ್ರಿಕ್ ಮಾಹಿತಿಯ ನಿಯಂತ್ರಣ ಮತ್ತು ಅದನ್ನು ಯಾರ್ಯಾರು ದಕ್ಕಿಸಿಕೊಳ್ಳಬಹುದೆಂಬ ಸಂಗತಿ. ಆಧಾರ್ ನೊಂದಾವಣಿ ಅರ್ಜಿ ನಮೂನೆಯು ಕೆಳಗಿನ ರೀತಿಯಲ್ಲಿ ಒಂದು ಅಸ್ಪಷ್ಟವಾದ ಸಮ್ಮತಿ ಪರವಾನಗಿಯನ್ನು ಪಡೆದುಕೊಳ್ಳುತ್ತದೆ:  ನಾನು ಇಲ್ಲಿ ಒದಗಿಸಿರುವ ಮಾಹಿತಿಯನ್ನು ಯು.ಐ.ಡಿ.ಎ.ಐ (ಯುನಿಕ್ ಐಡೆಂಟಿಫಿಕೇಷನ್ ಆಥಾರಿಟಿ ಆಫ್ ಇಂಡಿಯಾ- ಭಾರತದ ವಿಶಿಷ್ಟ ಗುರುತು ನೀಡಿಕೆ ಪ್ರಾಧಿಕಾರ)ವು  ಸಾರ್ವಜನಿಕ ಮತ್ತು ಕಲ್ಯಾಣ ಯೋಜನಾ ಸೇವೆಗಳನ್ನು ಒದಗಿಸುತ್ತಿರುವ ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದರ ಬಗ್ಗೆ ನನಗೆ ಯಾವುದೇ ಆಕ್ಷೇಪಣೆಯಿಲ್ಲ. ಇದರ ಕುರಿತು ಭಾರತದ ವಿಶಿಷ್ಟ ಗುರುತು ನೀಡಿಕೆ ಪ್ರಾಧಿಕಾರವು ಯಾವುದೇ ನಿಬಂಧನೆಗಳನ್ನು ಸ್ಪಷ್ಟೀಕರಿಸಿಲ್ಲವಾದರೂ ನೊಂದಾವಣಿ ಕೇಂದ್ರದಲ್ಲಿನ ಸಿಬ್ಬಂದಿಗಳು ಭವಿಷ್ಯದ ದೃಷ್ಟಿಯಿದ ಸಮ್ಮತಿ ನೀಡುವುದು ಒಳ್ಳೆಯದೆಂದು ಪುಸಲಾಯಿಸುತ್ತಾರೆ. ಆಧಾರ್ ಬಗ್ಗೆ ನಡೆಸುತ್ತಿರುವ ಪ್ರಚಾರದಲ್ಲಿ ಸರ್ಕಾರವು ಈ ಸ್ವಸಮ್ಮತಿಯ ಬಗ್ಗೆ ಹೆಚ್ಚಿಗೆ ಪ್ರಚಾರ ಮಾಡುತ್ತಿಲ್ಲ. ಅದೇರೀತಿ ಒಂದು ನೊಂದಾಯಿತ ಮೊಬೈಲ್ ಫೋನ್ ಇದ್ದಲ್ಲಿ ಒಂದು ಬಾರಿ ಪಡೆದುಕೊಳ್ಳುವ ಪಾಸ್‌ವರ್ಡ್ (ಒಟಿಪಿ) ವ್ಯವಸ್ಥೆಯ ಮೂಲಕ ಗುರುತು ಪ್ರಾಧಿಕಾರದ ವೆಬ್ ಸೈಟಿನಲ್ಲಿ ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಬಹುದೆಂಬುದರ ಬಗ್ಗೆಯೂ ಪ್ರಚಾರ ಮಾಡಿಲ್ಲ. ಆದರೆ ಇಂಟರ್‌ನೆಟ್ ಮತ್ತು ಮೊಬೈಲ್ ಸೌಲಭ್ಯವಿಲ್ಲದವರು ಈ ಅವಕಾವನ್ನು ಬಳಸಿಕೊಳ್ಳಲೂ ಆಗುವುದಿಲ್ಲ.

 ಆಧಾರ್ ಕಾಯಿದೆಯೂ ಈ ಯಾವುದೇ ಅಂಶಗಳನ್ನು ಮುಟ್ಟುವುದೂ ಇಲ್ಲ. ಬದಲಿಗೆ ಅದರ ೫೭ನೇ ಅಂಶದಲ್ಲಿ ಈ ಆಧಾರ್ ಸಂಖ್ಯೆಯನ್ನು ಸರ್ಕಾರ, ಅಥವಾ ಅಸ್ತಿತ್ವದಲ್ಲಿರುವ ಕಾನೂನಿಗೆ ಅಥವಾ ಒಪ್ಪಂದಕ್ಕೆ ಒಳಪಟ್ಟು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಯಾವುದೇ ಉದ್ದೇಶಕ್ಕೆ ಯಾವುದೇ ವ್ಯಕ್ತಿಯ ಗುರುತನ್ನು ಧೃಢೀಕರಿಸಲು ಬಳಸಬಹುದಾದ ಅಧಿಕಾರವನ್ನು ನೀಡುತ್ತದೆ. ಹೀಗೆ ಈ ಕಾನೂನು ತುಂಬಾ ಸ್ಪಷ್ಟವಾಗಿ ಸರ್ಕಾರೇತರ ಸಂಸ್ಥೆಗಳು ಸಹ ಆಧಾರ್ ಧೃಢೀಕರಣವನ್ನು ಮತ್ತದರಲ್ಲಿರುವ ಮಾಹಿತಿಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈಗಾಗಲೇ ಇದು ಬಳಕೆಗೂ ಬಂದಿದೆ. ತೀರಾ ಇತ್ತೀಚೆಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ತನ್ನಲ್ಲಿದ್ದ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಬಳಸಿಕೊಳ್ಳುತ್ತಿದ್ದ ೨೪ ಕಂಪನಿಗಳಿಗೆ ಪ್ರಾಧಿಕಾರವು ತಡೆಯೊಡ್ಡಿದೆ. ಇದರ ಜೊತೆಗೆ ಯಾವುದು ಬಯೊಮೆಟ್ರಿಕ್ ಮಾಹಿತಿ ಎಂಬುದರ ವ್ಯಾಖ್ಯಾನದಲ್ಲಿ ಇತರ ಜೈವಿಕ ಅಂಶಗಳೂ (ಭವಿಷ್ಯದಲ್ಲಿ ಡಿಎನ್‌ಎ ಕೂಡಾ ಎಂದು ಓದಿಕೊಳ್ಳಿ) ಎಂಬುದು ಮತ್ತಷ್ಟು ಗೊಂದಲವನ್ನು ಹುಟ್ಟಿಹಾಕಿದೆ. ಇದಕ್ಕಿಂತ ಹೆಚ್ಚಿನ ಗೊಂದಲವನ್ನು ಸುಪ್ರೀಂ ಕೋರ್ಟು ತನ್ನ ಇತ್ತೀಚಿನ ೨೦೧೭ರ ಫೆಬ್ರವರಿ ಆದೇಶದ ಮೂಲಕ ಹುಟ್ಟಿಹಾಕಿದೆ. ಆ ಆದೇಶದಲ್ಲಿ ಎಲ್ಲಾ ಮೊಬೈಲ್ ಫೋನುಗಳ ಸಿಮ್ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಲಗತ್ತಿಸುವುದನ್ನು ಕಡ್ಡಾಯಮಾಡುವ ಮೂಲಕ, ಸಾರ್ವಜನಿಕ ಸೇವೆಗಳಿಗೆ ಆಧಾರ್ ಅನ್ನು ಕಡ್ಡಾಯ ಮಾಡಬಾರದೆಂಬ ತನ್ನ ಈವರೆಗಿನ ಆದೇಶಗಳಿಗೆ ತಾನೇ ವ್ಯತಿರಿಕ್ತವಾಗಿ ಆದೇಶ ನೀಡಿದೆ. ಇವೆಲ್ಲವೂ ಈ  ಬೃಹತ್ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ದತ್ತಾಂಶಗಳ ಸಂಗ್ರಹ ಮತ್ತು ನಿಯಂತ್ರಣಗಳ ಬಗ್ಗೆ ಹಲವು ಕಳವಳಕಾರಿ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಭಾರತ ಪ್ರಭುತ್ವವು ಆಧಾರ್ ಅನ್ನು ಪ್ರೋತ್ಸಾಹಿಸುವ ಮೂಲಕ ತಮ್ಮ ಸೇವೆಯನ್ನು ಒದಗಿಸಲು ನಮ್ಮ ಮಾಹಿತಿಗಳನ್ನು ಒದಗಿಸುವುದನ್ನು ಕಡ್ಡಾಯ ಶರತ್ತನ್ನಾಗಿಸುವ ಕಾರ್ಪೊರೇಟ್ ಸಂಸ್ಥೆಗಳ ರೀತಿ ವರ್ತಿಸುತ್ತಿದೆ. ಮತ್ತು ಅದನ್ನು ನಂತರದಲ್ಲಿ ನಮ್ಮ ಮೇಲೆಯೇ ಬೇಹುಗಾರಿಕೆ ನಡೆಸಲು ಬಳಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ತನ್ನ ಜನರಿಂದ ಪಾರದರ್ಶಕತೆಯನ್ನು ನಿರೀಕ್ಷಿಸುವ ಪ್ರಭುತ್ವವೊಂದು ತಾನು ಮಾತ್ರ ಅಪಾರದರ್ಶಕವಾಗಿರುವುದು ಸ್ಪಷ್ಟ.                                       

Updated On : 13th Nov, 2017
Back to Top