ಆರೋಗ್ಯ ಸೇವಾ ವಲಯವು ಸಂಪೂರ್ಣವಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಸೇರಬೇಕು
ಆರೋಗ್ಯ ಸೇವೆಯು ಒಂದು ಸಾರ್ವಜನಿಕ ಹೊಣೆಗಾರಿಕೆಯಾಗಿದ್ದು ಪ್ರಭುತ್ವದ ಜವಾಬ್ದಾರಿಯಾಗಿದೆಯೆಂಬುದನ್ನು ಭಾರತದ ಸರ್ಕಾರವು ಅರ್ಥಮಾಡಿಕೊಳ್ಳಬೇಕಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ರವಿ ದುಗ್ಗಲ್ ಬರೆಯುತ್ತಾರೆ:
ನೀತಿ ಅಯೋಗದ ಉಪಾಧ್ಯಕ್ಷರಾದ ರಾಜೀವ್ ಕುಮಾರ್ ಅವರು ಕೆಲದಿನಗಳ ಹಿಂದೆ ನೀಡಿದ ಹೇಳಿಕೆಯೊಂದರಲ್ಲಿ ಇತ್ತೀಚೆಗೆ ಬಜೆಟ್ಟಿನಲ್ಲಿ ಪ್ರಕಟಿಸಿರುವ ಮೋದಿಕೇರ್ (೧೦ ಕೋಟಿ ಬಡವರ ಆರೋಗ್ಯ ವೆಚ್ಚವನ್ನು ವಿಮೆಯ ಮೂಲಕ ಭರಿಸುವ ಮೋದಿ ಸರ್ಕಾರದ ಯೋಜನೆ- ಅನು) ಯೋಜನೆಯಿಂದಾಗಿ ಖಾಸಗಿ ಆರೋಗ್ಯ ಸೇವಾ ಮಾರುಕಟ್ಟೆಯು ಇನ್ನಷ್ಟು ವಿಸ್ತರಣೆಗೊಳ್ಳಲಿದ್ದು ಅದರಲ್ಲೂ ವಿಶೇಷವಾಗಿ ಮೂರು ಮತ್ತು ನಾಲ್ಕನೇ ಹಂತದ ಪಟ್ಟಣಗಳಲ್ಲಿ ಖಾಸಗಿ ಆರೋಗ್ಯ ಸೇವಾ ಮಾರುಕಟ್ಟೆಯ ವಿಸ್ತರಣೆಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ. ಇದು ಒಂದು ನಿಜಕ್ಕೂ ದುರದೃಷ್ಟಕರ ಹೇಳಿಕೆಯಾಗಿದೆ. ಮೇಲಾಗಿ ಇತರೆ ಸರಕು ಮತ್ತು ಸೇವೆಗಳ ಬಗ್ಗೆ ಮಾರುಕಟ್ಟೆಯು ಹೇಗೆ ವರ್ತಿಸುತ್ತದೋ ಆ ರೀತಿಯಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ವರ್ತಿಸುವುದಿಲ್ಲ. ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಸರಬರಾಜು ವಲಯವೇ ಬೇಡಿಕೆಯನ್ನು ಹುಟ್ಟುಹಾಕುತ್ತದೆ. ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಮತ್ತು ಸರಕು ಉತ್ಪಾದಕರೇ ಆ ಕ್ಷೇತ್ರದ ಬೇಡಿಕೆಯನ್ನೂ ಮತ್ತು ಯಾವ ಪ್ರಮಾಣದ ಮತ್ತು ಯಾವ ಸ್ವರೂಪದ ಸರಬರಾಜನ್ನು ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಈ ಕ್ಷೇತ್ರದಲ್ಲಿ ಮಾಹಿತಿಯ ಅಸಮತೆಯಿರುವುದರಿಂದ ಯಾವುದನ್ನು ಅರೋಗ್ಯ ಸೇವೆಯ ಪೂರೈಕೆದಾರರು ರೋಗಿಗಳ ಮೇಲೆ ಹೇರುತ್ತಾರೋ ಅದನ್ನು ಅವರು ಕಡ್ಡಾಯವಾಗಿ ಕೊಂಡುಕೊಳ್ಳಲೇಬೇಕಾಗುತ್ತದೆ: ಸಾಲು ಸಾಲು ರೋಗ ಪತ್ತೆ ಉಪಕರಣಗಳು, ಅಪಾರವಾದ ಔಷಧಿಗಳು ಮತ್ತು ವಿವಿಧ ಪ್ರಕ್ರಿಯೆಗಳು ಮತ್ತು ದೇಹದ ಮೇಲಿನ ಪ್ರಯೋಗಗಳು..ಇನ್ನಿತ್ಯಾದಿಗಳು.
ಉದಾಹರಣೆಗೆ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆಯು ಇತ್ತೀಚೆಗೆ ಹಲವಾರು ಖಾಸಗಿ ಆಸ್ಪತೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಪತ್ತೆಹಚ್ಚಿತ್ತು. ಅಲ್ಲಿಯ ಹಲವಾರು ಪ್ರಖ್ಯಾತ ಆಸ್ಪತ್ರೆಗಳು ಕ್ಯಾಥೆಟರ್‌ನಂಥ ವೈದ್ಯಕೀಯ ಸಾಧನಗಳನ್ನು ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ರೋಗಿಗಳಿಗೆ ಮಾರುತ್ತಿದ್ದರಲ್ಲದೆ ಒಮ್ಮೆ ಒಬ್ಬ ರೋಗಿಗೆ ಬಳಸಿದ ಕ್ಯಾಥೆಟರ್‌ಗಳನ್ನು ಮತ್ತೆ ಮೂರು ರೋಗಿಗಳ ಮೇಲೆ ಬಳಸುತ್ತಿದ್ದನ್ನು ಸಹ ಇಲಾಖೆಯು ಪತ್ತೆ ಹಚ್ಚಿತ್ತು. ಈ ಕ್ರಮಗಳು ರೋಗಿಗಳ ವೆಚ್ಚವನ್ನು ಅನಗತ್ಯವಾಗಿ ಹೆಚ್ಚಿಸುವುದಲ್ಲದೆ ರೋಗಿಗಳಿಗೆ ಮಾಡುವ ವಂಚನೆಯೂ ಆಗಿರುತ್ತದೆ. ಏಕೆಂದರೆ ಇಂಥಾ ಅಕ್ರಮಗಳಿಂದ ರೋಗಿಗಳು ಹಲವಾರು ಸೋಂಕಿಗೂ ಗುರಿಯಾಗುತ್ತಾರೆ ಹಾಗೂ ಆದರ ಇಲಾಜಿಗಾಗಿ ಮತ್ತಷ್ಟು ವೆಚ್ಚವನ್ನು ಮಾಡುವ ವಿಷ ವೃತ್ತಕ್ಕೆ ಸಿಲುಕುತ್ತಾರೆ. ಈ ಕ್ರಮಗಳಿಂದಾಗಿ ಒಂದೆಡೆ ರೋಗಿಗಳು ತಮ್ಮ ಸ್ವಂತ ಕಿಸೆಯಿಂದ ಮಾಡುವ ವೆಚ್ಚವೂ ಹೆಚ್ಚಾಗುತ್ತಾ ಹೋಗಿದೆಯಲ್ಲದೆ ಆರೋಗ್ಯ ಸೇವಾ ಪೂರೈಕೆದಾರರಿಗೆ ಹೆಚ್ಚೆಚ್ಚು ಗಳಿಕೆಯನ್ನೂ ಮತ್ತು ಲಾಭವನ್ನೂ ದೊರಕಿಸಿದೆ.
ಇಂಥಾ ಅಕ್ರಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಮೇಲಿನಿಂದ ಕೆಳಗಿನವರೆಗೂ ವ್ಯಾಪಿಸಿಕೊಂಡಿದೆ: ಅನಗತ್ಯ ಪರೀಕ್ಷೆಗಳನ್ನು ಸಲಹೆ ಮಾಡುವುದರ ಜೊತೆಗೆ ಅದಕ್ಕೆ ನೀತಿಬಾಹಿರ ಶುಲ್ಕವನ್ನೂ ಸಬಂಧಪಟ್ಟ ಆಸ್ಪತ್ರೆಗಳಿಂದ ವೈದ್ಯರು ಪಡೆದುಕೊಳ್ಳುವುದು (ಕಟ್ ಪ್ರಾಕ್ಟೀಸ್), ಅದೇ ಕಾರಣಗಳಿಂದ ಅನಗತ್ಯವಾಗಿ ಹಲವಾರು ರೋಗ ಪತ್ತೆ ಪರೀಕ್ಷೆಗಳನ್ನೂ ಮತ್ತು ಔಷಧಿಗಳನ್ನೂ ನಿಗದಿ ಮಾಡುವುದು, ಔಷಧ ಉದ್ಯಮಗಳಿಂದ ಹಲವಾರು ಉಡುಗೊರೆಗಳನ್ನೂ ಮತ್ತು ರಿಯಾಯತಿದರದ ಪ್ರವಾಸದ ಸೌಲಭ್ಯಗಳನ್ನು ಪಡೆದುಕೊಳ್ಳುವುದು, ಅನಗತ್ಯವಾದ ವಿಧಿ-ವಿಧಾನಗಳನ್ನು ಮತ್ತು ಶಸ್ತ್ರ ಚಿಕಿತ್ಸೆಗಳನ್ನೂ ಮಾಡುವುದು, ಅಂಗಾಂಗ ಕಸಿ ವ್ಯಾಪಾರ, ಅತಿ ಹೆಚ್ಚು ಶುಲ್ಕ ವಿಧಿಸುವುದು, ವಿಮಾ ವಿಧಾನದಲ್ಲಿ ವಂಚಿಸುವುದು..ಇನ್ನಿತ್ಯಾದಿಗಳು. ಖಾಸಗಿ ಆರೋಗ್ಯ ಕ್ಷೇತ್ರದ ಬೆಳವಣಿಗೆಯ ಜೊತೆಜೊತೆಗೆ ಇಂಥಾ ಅಕ್ರಮಗಳ ಪಟ್ಟಿಯೂ ಬೆಳೆಯುತ್ತಲೇ ಇದೆ.
ವೈದ್ಯಕೀಯ ಚಿಕಿತ್ಸಾ ನಿಯಂತ್ರಣಾ ಕಾಯಿದೆಯನ್ನು ಭಾರತೀಯ ವೈದ್ಯಕೀಯ ಸಂಘ (ಇಂಡಿಯನ್ ಮೆಡಿಕಲ್ ಅಸೋಸಿಯೇಶನ್- ಐಎಂಎ) ಉದ್ದಕ್ಕೂ ವಿರೋಧಿಸಿಕೊಂಡೇ ಬಂದಿದೆ. ಅದರಲ್ಲೂ ಈ ಕ್ಷೇತ್ರದಲ್ಲಿನ ಸೇವಾ ದರಗಳ ನಿಯಂತ್ರಣವನ್ನು ಐಎಂಎ ವಿಶೇಷವಾಗಿ ವಿರೋಧಿಸುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಕೆನಡಾದ ವೈದ್ಯರುಗಳು ಈಗಾಗಲೇ ತಮ್ಮ ಸೇವೆಗೆ ಸೂಕ್ತವಾದ ವೇತನವು ಸಿಗುತ್ತಿರುವುದರಿಂದ ತಮ್ಮ ವೇತನವನ್ನು ಪದೇಪದೇ ಹೆಚ್ಚಿಸಬಾರದೆಂದು ಇತ್ತೀಚೆಗೆ ಮುಷ್ಕರ ಹೂಡಿದ್ದರು.
ಭಾರತದ ಹಾಗೂ ಕೆನಡಾ ದೇಶಗಳ ನಡುವಿನ (ಅಥವಾ ಜಗತ್ತಿನ ಅಂಥಾ ಹಲವಾರು ದೇಶಗಳಲ್ಲಿನ) ಅರೋಗ್ಯ ಸೇವೆಗಳಲ್ಲಿನ ವ್ಯತ್ಯಾಸಗಳಿಗೆ ಅಲ್ಲಿನ ಆರೋಗ್ಯ ಸೇವೆಗಳ ಪರಿಣಾಮಕಾರಿ ನಿಯಂತ್ರಣ ಮತ್ತು ವೈದ್ಯಕೀಯ ಸೇವೆಯ ನೀತಿತತ್ವಗಳಿಗೆ ತೋರುವ ಬದ್ಧತೆಗಳೇ ಪ್ರಧಾನ ಕಾರಣವಾಗಿದೆ. ಭಾರತದಲ್ಲಿ ಐಎಂಎಯು ಒಂದು ವೃತ್ತಿಪರರ ಸಂಘಕ್ಕಿಂತ ಹೆಚ್ಚಾಗಿ ಒಂದು ವ್ಯಾಪಾರಿಗಳ ಒಕ್ಕೂಟದಂತೆ ಕೆಲಸ ಮಾಡುತ್ತದೆ. ಐತಿಹಾಸಿಕವಾಗಿ ಐಎಂಎ ಯು ಯಾವುದೇ ವಿಧವಾದ ನಿಯಂತ್ರಣ, ದರ ನಿಯಂತ್ರಣಗಳನ್ನು ವಿರೋಧಿಸಿಕೊಂಡೇ ಬಂದಿದೆ. ತನ್ನ ಸಹೋದ್ಯೋಗಿಗಳು ಅಕ್ರಮಗಳಲ್ಲಿ ತೊಡಗಿಕೊಂಡಾಗ ಅದು ಯಾವುದೇ ಶಿಸ್ತು ಕ್ರಮಗಳನ್ನು ತೆಗೆದುಕೊಂಡಿಲ್ಲ. ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ನೀತಿ ಸಂಹಿತೆಯನ್ನು ರೂಪಿಸುವ ಬಗ್ಗೆ ಅಪಾರ ನಿರ್ಲಕ್ಷ್ಯವನ್ನು ತೋರುತ್ತಾ ಬಂದಿದೆ. ಇದರ ಪರಿಣಾಮವಾಗಿ ಭಾರತದ ಆರೋಗ್ಯ ಕ್ಷೇತ್ರದ ರಾಜಕೀಯ ಅರ್ಥಿಕತೆಯು ವಾಣಿಜ್ಯೀಕರಣಗೊಂಡಿದೆ ಮತ್ತು ಲಾಭಮುಖಿಯಾಗಿದೆ.
೨೦೧೭ರ ರಾಷ್ಟ್ರೀಯ ಆರೋಗ್ಯ ಯೋಜನೆ ಮತ್ತು ೨೦೧೮-೧೯ರ ಬಜೆಟ್ಟಿನಲ್ಲಿ ಆಯುಷ್ಮಾನ್ ಭಾರತದಡಿಯಲ್ಲಿ ಘೋಷಿಸಲಾದ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಗಳು ಭಾರತದ ಆರೋಗ್ಯ ಕ್ಷೇತ್ರವನ್ನು ನರೇಂದ್ರ ಮೋದಿಯವರು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬಯಸಿದ್ದಾರೆಂಬುದನ್ನಂತೂ ಸ್ಪಷ್ಟಗೊಳಿಸುತ್ತದೆ. ಆರೋಗ್ಯ ವಿಷಯಗಳ ಬಗ್ಗೆ ನೀತಿಯನು ರೂಪಿಸುವ ಅಧಿಕಾರವನ್ನು ನೀತಿ ಅಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಸಿದುಕೊಂಡಿದೆ. ಮತ್ತು ಅದು ಅರೋಗ್ಯ ಕ್ಷೇತ್ರವನ್ನು ಪ್ರಧಾನವಾಗಿ ಖಾಸಗಿ ಆರೋಗ್ಯ ಸೇವಾ ಮಾರುಕಟ್ಟೆಯನ್ನು ಉತ್ತೇಜಿಸುವ ಕಡೆ, ಆರೋಗ್ಯ ಸೇವಾ ವೆಚ್ಚಗಳಿಗೆ ವಿಮಾ ಮಾದರಿಯ ಮೂಲಕ ಹಣಕಾಸನ್ನು ಒದಗಿಸುವ ವಿಧಾನವನ್ನು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಿಸುವಂಥ ಶಿಫಾರಸ್ಸುಗಳನ್ನು ಮಾತ್ರ ಮಾಡುತ್ತಿದೆ.
ಜಗತ್ತಿನಾದ್ಯಂತ ಯಾವ ದೇಶಗಳು ತನ್ನ ಜನರಿಗೆ ಸಮಾನ ಅವಕಾಶಗಳುಳ್ಳ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆಯೋ ಅವೆಲ್ಲಾ ಸಾರ್ವಜನಿಕ ನಿಗಾದಡಿಯಲ್ಲಿ ತಮ್ಮ ಆರೋಗ್ಯ ಸೇವಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಟ್ಟಿವೆ ಮತ್ತು ತೆರಿಗೆ ಮತ್ತು ಸಾಮಾಜಿಕ ವಿಮಾ ಪದ್ಧತಿಗಳ ಮೂಲಕ ಅದರ ವೆಚ್ಚವನ್ನು ಭರಿಸುತ್ತಿವೆ. ಆ ದೇಶಗಳು ತಮ್ಮ ನಾಗರಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಲು ಆದಾಯ ಅಥವಾ ಉದ್ಯೋಗ ಆಧಾರಿತ ಅರ್ಹತಾ ಮಾನದಂಡಗಳನ್ನು ನಿಗದಿ ಮಾಡುವುದಿಲ್ಲ್ಲ. ಅಷ್ಟುಮಾತ್ರವಲ್ಲ, ಆರೋಗ್ಯ ಸೇವಾ ಪೂರೈಕೆದಾರರ ನಡುವೆ ಒಂದು ಬಲವಾದ ಸಾಂಸ್ಕೃತಿಕ ನೀತಿ ಸಂಹಿತೆಯನ್ನೂ ರೂಪಿಸಿವೆ. ಮೇಲಾಗಿ ಈ ದೇಶಗಳು ತಮ್ಮ ದೇಶದ ಆರೋಗ್ಯ ಸೇವೆಯನ್ನೂ ಮಾರುಕಟ್ಟೆಗಳ ಮರ್ಜಿಗೆ ಬಿಟ್ಟಿಲ್ಲ. ಅಷ್ಟೇ ಅಲ್ಲ. ಆ ದೇಶಗಳು ಆರೋಗ್ಯ ಸೇವೆಯನ್ನು ಒಂದು ಸಾರ್ವಜನಿಕ ಹೊಣೆಗಾರಿಕೆಯಾಗಿ ಮತ್ತು ಪ್ರಭುತ್ವದ ಜವಾಬ್ದಾರಿಯಾಗಿ ಖಾತರಿಗೊಳಿಸಿವೆ.
ಭಾರತದ ಅರೋಗ್ಯ ಸೇವಾ ಕ್ಷೇತ್ರದ ಬೆಳವಣಿಗೆಯ ದಿಕ್ಕಿನ ಬಗ್ಗೆ ಕೆಲವು ಕಠಿಣವಾದ ಪ್ರಶ್ನೆಗಳನ್ನು ಕೇಳುವ ಸಮಯ ಬಂದಿದೆ. ನಮ್ಮ ಅಧಿಕಾರಿಗಳಿಗೆ ಮತ್ತು ಸಂಸದರಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ (ಸಿಜಿಎಚ್‌ಎಸ್) ಸೌಲಭ್ಯಗಳನ್ನು ಏಕೆ ಒದಗಿಸಲಾಗಿದೆ (ಅವುಗಳಲ್ಲಿ ಬಹಳಷ್ಟನ್ನು ಈಗ ಖಾಸಗಿ ಕ್ಷೇತ್ರಕ್ಕೆ ವಹಿಸಲಾಗಿದೆ)? ೨೦೧೫ರಲ್ಲಿ ಈ ಯೋಜನೆಯ ಪ್ರತಿ ಫಲಾನುಭವಿಗಾಗಿ ಮಾಡಿದ ವೆಚ್ಚದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತಲಾ ೬,೩೦೦ ರೂ.ಗಳು ಖರ್ಚಾಗಿತ್ತು. ಆದರೆ ಇತರ ಸಾರ್ವಜನಿಕರ ಮೇಲೆ ಸರ್ಕಾರವು ತಲಾ ೧,೧೦೦ ರೂ.ಗಳನ್ನು ಮಾತ್ರ ವೆಚ್ಚ ಮಾಡುತ್ತದೆ. ಈ ಅನುಪಾತವನ್ನು ಈಗಲಾದರೂ ಬದಲಿಸಲೇ ಬೇಕಿದೆ. ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಯ ಬಗ್ಗೆ ಮಾತನಾಡುತ್ತಿದ್ದರೂ ಅದರ ನೀತಿಗಳು ಮತ್ತು ಯೋಜನೆಗಳು ಮಾತ್ರ ಕೆಲವು ವರ್ಗದ ಜನತೆಗೆ ಮಾತ್ರ ದಕ್ಕುವ ರೀತಿಯ ಧೋರಣೆಯನ್ನು ಹೊಂದಿವೆ. ಇದರಿಂದಾಗಿ ಬಹಳಷ್ಟು ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಮತ್ತು ಆರೋಗ್ಯ ಸೌಲಭ್ಯಗಳ ಅವಕಾಶಗಳಲ್ಲಿ ಅಪಾರ ಅಸಮತೆಯೂ ಉಂಟಾಗುತ್ತಿದೆ.
ಇದು ಬದಲಾಗಬೇಕೆಂದರೆ ಆರೋಗ್ಯ ಸೇವೆಯನ್ನು ಮಾರುಕಟ್ಟೆಯ ಹಂಗಿನಿಂದ ಮುಕ್ತಗೊಳಿಸಿ ಸರ್ಕಾರದ ಜವಾಬ್ದಾರಿಯನ್ನಾಗಿ ಮಾಡಬೇಕು. ಜಗತ್ತಿನಾದ್ಯಂತ ಬಹುಪಾಲು ದೇಶಗಳು ಇದೇ ದಿಕ್ಕಿನಲ್ಲಿ ಮುಂದುವರೆಯುತ್ತಿದ್ದು ಭಾರತವು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದಕ್ಕೆ ಯಾವುದೇ ಕಾರಣಗಳಿಲ್ಲ. ವಾಸ್ತವವಾಗಿ ಹೇಳುವುದಾದರೆ, ಮಿಜೋರಾಮ್, ಸಿಕ್ಕಿಂ, ಗೋವಾ, ಪಾಂದಿಚೆರಿ, ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ದಿಕ್ಕಿನಲ್ಲಿ ನಡೆದಿವೆ ಮತ್ತು ತಮ್ಮ ಬಜೆಟ್ಟಿನಲ್ಲಿ ತಲಾವಾರು ೪,೦೦೦ ರೂ.ಗಳನ್ನು ವ್ಯಯ ಮಾಡಲು ಪ್ರಾರಂಭಿಸಿವೆ. ಆ ರಾಜ್ಯಗಳಲ್ಲಿ ಗಟ್ಟಿಯಾದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಿದ್ದು ಅಲ್ಲಿನ ಜನರು ಸಾಪೇಕ್ಷವಾಗಿ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ. ಭಾರತವು ನಿಜಕ್ಕೂ ಒಂದು ಆಯುಷ್ಮಾನ್ ಭಾರತವಾಗಬೇಕೆಂದರೆ ಸರ್ಕಾರವು ಜಗತ್ತಿನ ಹಾಗೂ ಮೇಲಿನ ರಾಜ್ಯಗಳ ಉದಾಹರಣೆಗಳಿಂದ ಪಾಠಗಳನ್ನು ಕಲಿತು ಆರೋಗ್ಯ ಸೇವೆಯನ್ನು ಮಾರುಕಟ್ಟೆ ಹಿಡಿತದಿಂದ ವಿಮುಕ್ತಗೊಳಿಸಿ ಸಾರ್ವಜನಿಕ ವಲಯದ ಸ್ವಾಮ್ಯಕ್ಕೆ ತಂದುಕೊಳ್ಳಬೇಕು.
ರವಿ ದುಗ್ಗಲ್ ಅವರು ಇಂಟರ್‌ನ್ಯಾಷನಲ್ ಬಜೆಟ್ ಪಾರ್ಟ್ನರ್‌ಶಿಪ್ ಸಂಸ್ಥೆಯ ಭಾರತದ ಸಮನ್ವಯಕಾರರಾಗಿದ್ದಾರೆ.