ಕ್ಷಯರೋಗದ ಸಂಪೂರ್ಣ ನಿರ್ಮೂಲನೆ ಆಗಲೇಬೇಕಿದೆ
ಕ್ಷಯರೋಗವನ್ನು ೨೦೩೦ರ ವೇಳೆಗೆ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಈಗಲೇ ಕಾರ್ಯಪ್ರವೃತ್ತರಾಗಬೇಕು.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ವಿಶ್ವಾದ್ಯಂತ ಕ್ಷಯರೋಗದ ಪ್ರಮಾಣ ಇಳಿಕೆಯಾಗುತ್ತಿದೆ. ಆzರೂ ೨೦೧೭ರ ವೇಳೆಗೆ ೧ ಕೋಟಿಯಷ್ಟು ಹೊಸ ಕ್ಷಯರೋಗಿಗಳು ಪತ್ತೆಯಾಗಿದ್ದರಲ್ಲದೆ ೧೬ ಲಕ್ಷ ಜನ ಈ ಖಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ. ಇದು ಸಾಗಬೇಕಿರುವ ದಾರಿ ಇನ್ನೂ ದೂರವಿದೆ ಎಂಬುದನ್ನು ಸೂಚಿಸುತ್ತದೆ. ಶತಮಾನಗಳಷ್ಟು ಹಳೆಯದಾದ ಈ ರೋಗವು ಈಗಲೂ ಜಗತ್ತಿನ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದೆ. ಅಲ್ಲದೆ ಈ ಖಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ರೋಗದ ಕಳಂಕ ಹೊತ್ತುಕೊಂಡು ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ಬೆಲೆಯನ್ನು ತೆರುತ್ತಿದ್ದಾರೆ. ಈ ಭೀಕರ ರೋಗವನ್ನು ಕೊನೆಗಾಣಿಸುವ ಬಗ್ಗೆ ವಿಶ್ವಸಂಸ್ಥೆಯು ಪ್ರಪ್ರಥಮ ಬಾರಿಗೆ ೨೦೧೮ರ ಸೆಪ್ಟೆಂರ್ ೨೬ರಂದು ಸಭೆ ಸೇರಿತ್ತು. ಮತ್ತು ೨೦೩೦ರ ವೇಳೆಗೆ ಈ ರೋಗವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ತ್ವರಿತಗೊಳಿಸುವ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತೀರ್ಮಾನವನ್ನು ಮಾಡಿತು. ವಿಶ್ವದ ಕ್ಷಯರೋಗಿಗಳಲ್ಲಿ ಶೇ.೨೭ರಷ್ಟು ಕ್ಷಯರೋಗಿಗಳು ಭಾರತದಲ್ಲಿದ್ದಾರೆ. ಹೀಗಾಗಿ ಭಾರತದಲ್ಲಿ ಕ್ಷಯರೋಗವನ್ನು ಕೊನೆಗಾಣಿಸುವ ಸಲುವಾಗಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ೨೦೨೫ರ ವೇಳೆಗೆ ಭಾರತವನ್ನು ಕ್ಷಯ ಮುಕ್ತಗೊಳಿಸುವುದಾಗಿ ಘೋಷಿಸಲಾಗಿದೆ.
ಕ್ಷಯ ರೋಗಕ್ಕೆ ತುತ್ತಾದವರೆಲ್ಲಾ ನೊಂದಾವಣೆ ಆಗದಿರುವುದರಿಂದ ಕ್ಷಯರೋಗಿಗಳ ಸಂಖ್ಯೆಯ ಬಗ್ಗೆ ಸರಿಯಾದ ಅಂದಾಜು ಮಾಡುವುದು, ನಿಯಂತ್ರಿಸುವುದು ಮತ್ತು ಶುಶ್ರೂಷೆ ಮಾಡುವುದು ಕಷ್ಟವಾಗುತ್ತಿದೆ. ವಿಶ್ವದಲ್ಲಿ ಅಂದಾಜು ೧ ಕೋಟಿ ಕ್ಷಯರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದ್ದರೂ ಅದರಲ್ಲಿ ದಾಖಲಾಗಿರುವುದು ಕೇವಲ ೬೪ ಲಕ್ಷ ಪ್ರಕರಣಗಳು ಮಾತ್ರ. ದಾಖಲಾಗದ ಇನ್ನು ೩೬ ಲಕ್ಷ ಪ್ರಕರಣಗಳಲ್ಲಿ ಶೇ.೨೬ರಷ್ಟು ಪ್ರಕರಣಗಳು ಭಾರತದಲ್ಲಿವೆ. ೨೦೧೩ರ ನಂತರ ಭಾರತದಲ್ಲೂ ಕ್ಷಯ ರೋಗ ದಾಖಲಾತಿಯಲ್ಲಿ ಜಿಗಿತವನ್ನು ಸಾಧಿಸಲಾಗಿದೆ. ಆದರೆ ಅದರಲ್ಲಿ ಬಹುಪಾಲು ಆರೋಗ್ಯ ಕ್ಷೇತ್ರದ ಖಾಸಗಿ ವಲಯದಿಂದ ದಾಖಲಾದ ಪ್ರಕರಣಗಳಾಗಿವೆ. ಹೀಗೆ ಪತ್ತೆ ಹಚ್ಚಲಾದ ಪ್ರಕರಣಗಳ ದಾಖಲಾತಿ ಆಗದಿರುವುದು ಮತ್ತು ಪತ್ತೆ ಹಚ್ಚುವಲ್ಲಿನ ವೈಫಲ್ಯಗಳೂ ಸೇರಿಕೊಂಡು ಶುಶ್ರೂಷೆ ಮಾಡಬಹುದಾದ ಮತ್ತು ಗುಣಪಡಿಸಬಹುದಾದ ಕ್ಷಯ ರೋಗವನ್ನು ಅತ್ಯಂತ ವ್ಯಾಪಕವಾದ ಮತ್ತು ಅಪಾಯಕಾರಿ ರೋಗವನ್ನಾಗಿ ಮಾಡಿಬಿಟ್ಟಿದೆ.
ಕ್ಷಯ ರೋಗವನ್ನು ಒಂದು ದಾಖಲಿಸಲೇ ಬೇಕಾದ ರೋಗವೆಂದು ೨೦೧೨ರಲ್ಲಿ ಘೋಷಿಸಲಾಯಿತು. ಆ ನಂತರ ಕ್ಷಯ ರೋಗದ ದಾಖಲಾತಿಯನ್ನು ಹೆಚ್ಚಿಸುವ ಸಲುವಾಗಿ ವೈದ್ಯರು ಮತ್ತು ಆಸ್ಪತ್ರೆಗಳು, ಅದರಲ್ಲೂ ವಿಶೇಷವಾಗಿ ಖಾಸಗಿ ವಲಯದ ಸಂಸ್ಥೆಗಳು, ತಮ್ಮಲ್ಲಿಗೆ ಬರುವ ಕ್ಷಯ ರೋಗಿಗಳ ವರದಿಯನ್ನು ಆನ್‌ಲೈನಿನಲ್ಲಿ ದಾಖಲೆ ಮಾಡುವ ಸಲುವಾಗಿ ನಿಕ್ಷಯ್ ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು. ಆದರೆ ನಿಕ್ಷಯ್ ಅನ್ನು ಪರಿಚಯಿಸಿದ ನಂತರದ ಮೊದಲ ವರ್ಷಗಳಲ್ಲಿ ಅದು ಹಲವಾರು ತೊಡಕುಗಳನ್ನು ಅನುಭವಿಸಿದೆ. ಈ ವ್ಯವಸ್ಥೆಯ ಬಗ್ಗೆ ಮಾಹಿತಿಯ ಕೊರತೆ, ಅದರ ಬಳಕೆಯ ಬಗೆಗಿನ ತಪ್ಪು ತಿಳವಳಿಕೆಯಿಂದಾಗಿ ವರದಿ ಮಾಡದಿರುವುದು, ವರದಿಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳದಿರುವುದು, ಮತ್ತು ಇಂಥಾ ಪ್ರಕರಣಗಳನ್ನು ವರದಿ ಮಾಡಲು ಬೇಕಾದ ಉತ್ತೇಜನಗಳು ಇಲ್ಲದಿರುವುದು ಅಂಥಾ ತೊಡಕುಗಳಲ್ಲಿ ಕೆಲವು. ಈ ಹಿಂದೆ ಖಾಸಗಿ ಕ್ಷೇತ್ರದಲ್ಲಿರುವ ವೈದ್ಯರು ಮತ್ತು ಸಂಸ್ಥೆಗಳು ಕ್ಷಯ ರೋಗದ ಪ್ರಕರಣಗಳ ಬಗ್ಗೆ ವರದಿಯನ್ನೇ ನೀಡುತ್ತಿರಲಿಲ್ಲ. ಆದರೆ ಈಗ ಅದರಲ್ಲಿ ಸುಧಾರಣೆಯಾಗಿದೆ. ಆದರೂ ಇದೇ ಬಗೆಯ ಆನ್‌ಲೈನ್ ವ್ಯವಸ್ಥೆಯನ್ನು ಪರಿಚಯಿಸಿದ್ದ ಚೀನಾ ತನ್ನ ದೇಶದಲ್ಲಿ ಕ್ಷಯ ರೋಗ ಪತ್ತೆ, ದಾಖಲಾತಿ ಮತ್ತು ನಿಯಂತ್ರಣಗಳಲ್ಲಿ ಮಾಡಿರುವ ಸಾಧನೆಗೆ ಹೋಲಿಸಿದಲ್ಲಿ ಭಾರತದಲ್ಲಿ ನಿಕ್ಷಯ್ ನ ಅಳವಡಿಕೆ ಮತ್ತು ಬಳಕೆಗಳು ತುಂಬಾ ನಿಧಾನವಾಗಿವೆ. ಈ ಬಗ್ಗೆ ೨೦೧೮ರ ಮಾರ್ಚನಲ್ಲಿ ಒಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ ಕ್ಷಯ ರೋಗವನ್ನು ದಾಖಲಿಸದಿರುವುದನ್ನು ಒಂದು ದಂಡನಾರ್ಹ ಅಪರಾಧವನ್ನಾಗಿ ಮಾಡಿದೆಯಲ್ಲದೆ, ಔಷಧ ವ್ಯಾಪಾರಿಗಳು ಕ್ಷಯರೋಗದ ದಾಖಲಾತಿಯನ್ನು ಕಡ್ಡಾಯವಾಗಿಟ್ಟುಕೊಳ್ಳುವುದನ್ನೂ ಮತ್ತು ರೋಗಿಗಳಿಗೆ ವಿತರಿಸಲಾದ ಔಷಧಿಗಳ ದಾಖಲಾತಿಯನ್ನು ಕಾಪಿಟ್ಟುಕೊಳ್ಳುವುದನ್ನು ಕಡ್ಡಾಯಮಾಡಿದೆ. ಇದರ ಜೊತೆಗೆ ಕ್ಷಯರೋಗಿಗಳೇ ಖುದ್ದಾಗಿ ತಮ್ಮ ಬಗ್ಗೆ ಮಾಹಿತಿ ನೀಡುವುದಕ್ಕೂ ಮತ್ತು ಅದಕ್ಕೆ ಹಣಕಾಸಿನ ಬಹುಮಾನದ ಉತ್ತೇಜನ ನೀಡುವುದಕ್ಕೂ ಅವಕಾಶ ಕಲ್ಪಿಸಿದೆ.
ಈ ವ್ಯವಸ್ಥೆಯನ್ನು ಕ್ಷಯ ರೋಗದ ಚಿಕಿತ್ಸೆಯಂತೆ ನಿರಂತರವಾಗಿ ಮತ್ತು ಕಾಲಕಾಲಕ್ಕೆ ಸರಿಯಾಗಿ ಬಳಸುವಂತೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪತ್ತೆಯಾದ ರೋಗಿಗಳ ದಾಖಲಾತಿ ಹೆಚ್ಚಿದರೂ ಅದಕ್ಕೆ ಅನುಗುಣವಾಗಿ ಚಿಕಿತ್ಸೆಯ ಪರಿಣಾಮಗಳ ಬಗೆಗಿನ ದಾಖಲೆಗಳು ಸಮರ್ಪಕವಾಗಿಲ್ಲ. ೨೦೧೬ರಲ್ಲಿ ಪತ್ತೆಯಾದ ಎಲ್ಲಾ ಕ್ಷಯರೋಗಿಗಳಲ್ಲಿ ಶೇ.೨೨ರಷ್ಟು ರೋಗಿಗಳ ಬಗೆಗಿನ ಚಿಕಿತ್ಸಾ ಪರಿಣಾಮಗಳೇ ವರದಿಯಾಗಿರಲಿಲ್ಲ. ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಅದರ ಪರಿಣಾಮಗಳನ್ನು ನಿರಂತರವಾಗಿ ಬೆಂಬತ್ತದಿದ್ದರೆ ಕ್ಷಯರೋಗವು ಮರುಕಳಿಸುವ ಮತ್ತು ಬಹುಬಗೆಯ ಔಷಧ ನಿರೋಧಕ ಹಾಗೂ ತೀವ್ರ ಔಷಧ ನಿರೋಧಕ ಕ್ಷಯರೋಗಗಳಾಗಿ ಮಾರ್ಪಾಡಾಗುವ ಸಾಧ್ಯತೆಗಳಿರುತ್ತವೆ. ಒಟ್ಟಾರೆಯಾಗಿ ನೋಡಿದಲ್ಲಿ
ಶೇ.೬೯ರಷ್ಟು ಪ್ರಕರಣಗಳಲ್ಲಿ ರೋಗಗಳು ಗುಣವಾಗಿದ್ದರೂ, ಬಹುಔಷಧ ನಿರೋಧಕ ಕ್ಷಯ ಪ್ರಕರಣಗಳಲ್ಲಿ ಈ ಪ್ರಮಾಣ ಶೇ.೪೬ನ್ನು ದಾಟಿಲ್ಲ. ಹಾಗೆಯೇ ಕ್ಷಯ ಮತ್ತು ಏಡ್ಸ್/ಎಚ್‌ಐವಿ ಪೀಡಿತರ ಮನೆಗಳಲ್ಲಿರುವ ರೋಗಗಳಿಗೆ ಪಕ್ಕಾಗಬಲ್ಲಂಥ ಐದುವರ್ಷದೊಳಗಿನ ಮಕ್ಕಳಂಥವರಿಗೆ ಕ್ಷಯ ರೋಗ ತಟ್ಟದಂತೆ ತಡೆಗಟ್ಟುವ ವ್ಯವಸ್ಥೆಯ ವಿಸ್ತರಣೆಯೂ ಸಹ ತುಂಬಾ ನಿಧಾನಗತಿಯಲ್ಲಿದೆ.
ಜಗತ್ತಿನ ಅಂದಾಜು ೧೭೦ ಕೋಟಿಯಷ್ಟು ಜನ ಅಂದರೆ ಜಗತ್ತಿನ ಜನಸಂಖ್ಯೆಯ ಶೇ.೨೩ರಷ್ಟು ಜನ ನಿದ್ರಾಗ್ರಸ್ಥವಾದ ಕ್ಷಯರೋಗ ಸೋಂಕಿಗೆ ತುತ್ತಾಗಿರುವ ಸಂದರ್ಭದಲ್ಲಿ ಸೊಂಕಿಗೆ ಸುಲಭವಾಗಿ ಪಕ್ಕಾಗಬಲ್ಲ ದುರ್ಬಲ ಜನಸಮುದಾಯಗಳಿಗೆ ಕ್ಷಯ ರೋಗ ತಗಲದಂತೆ ನೋಡಿಕೊಳ್ಳುವ ಮತ್ತು ಹೊಸ ಕ್ಷಯರೋಗಿಗಳು ಹುಟ್ಟಿಕೊಳ್ಳದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಜರೂರಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ೨೦೧೮ರಲ್ಲಿ ಪ್ರಕಟಿಸಿದ ಜಾಗತಿಕ ಕ್ಷಯ ರೋಗದ ವರದಿ-೨೦೧೮ರಲ್ಲಿ ಕ್ಷಯ ರೋಗವನ್ನುಂಟು ಮಾಡಬಲ್ಲ ಐದು ಅಪಾಯಗಳನ್ನು ಹೆಸರಿಸಲಾಗಿದೆ. ಅವುಗಳು- ಕುಡಿತ, ಧೂಮಪಾನ, ಸಕ್ಕರೆ ಖಾಯಿಲೆ, ಎಚ್‌ಐವಿ/ಏಡ್ಸ್ ಮತ್ತು ಅಪೌಷ್ಟಿಕತೆ. ಇತರ ಎಲ್ಲಾ ಬಡರಾಷ್ಟ್ರಗಳಂತೆ ಭಾರತದಲ್ಲು ಬಡವರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿರುವುದರಿಂದ ಅದು ಭಾರತದಲ್ಲಿ ಕ್ಷಯರೋಗಕ್ಕೆ ಕಾರಣವಾಗಬಲ್ಲ ಅತ್ಯಂತ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹೀಗಾಗಿ ಕ್ಷಯರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆಯನ್ನು ಪರಿಣಾಮಕಾರಿಯನ್ನಾಗಿಸಲು ಒಟ್ಟಾರೆಯಾಗಿ ಪೌಷ್ಟಿಕತೆ ಮತ್ತು ಇತರ ಆರೋಗ್ಯ ಸೂಚಕಗಳಲ್ಲಿ, ಡತನ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಸುಧಾರಣೆಯಾಗಬೇಕಾದ ಅಗತ್ಯವಿದೆ. ಮೇಲಾಗಿ ಭಾರತದಲ್ಲಿ ಕೊನೆಯ ಬಾರಿ ಕ್ಷಯ ರೋಗಿಗಳ ಸರ್ವೆ ನಡೆದದ್ದು ೧೯೫೫ರಲ್ಲಿ. ಅಂದರೆ ೬೦ ವರ್ಷಕ್ಕಿಂತ ಹಳೆಯದಾದ ಅಂಕಿಅಂಶಗಳನ್ನಿಟ್ಟುಕೊಂಡು ಭಾರತದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಗಳು ಸಿದ್ಧವಾಗುತ್ತಿವೆ. ಈ ವಿಷಯದ ಬಗ್ಗೆ ನಿಯಮಿತವಾಗಿ ನಡೆಯುವ ರಾಷ್ಟ್ರೀಯ ಮಟ್ಟದ ಸರ್ವೆಗಳು ಆಯಾ ದೇಶಗಳಿಗೆ ಪರಿಣಾಮಕಾರಿಯಾದ ರೋಗ ನಿಯಂತ್ರಣಾ ಮತ್ತು ನಿರ್ಮೂಲನ ಯೋಜನೆಯನ್ನು ಹಮ್ಮಿಕೊಳ್ಳಲು ಸಹಾಯ ಮಾಡುತ್ತವೆ. ಅಂಥಾ ಒಂದು ಸರ್ವೆಯು ಭಾರತದಲ್ಲಿ ೨೦೧೯/೨೦ರಲ್ಲಿ ಮತ್ತೆ ನಡೆಯಲಿದೆ. ಹೀಗಾಗಿ ಕೇವಲ ಅಂದಾಜುಗಳನ್ನು ಮಾತ್ರ ಆಧರಿಸದೆ ಇನ್ನೂ ಹೆಚ್ಚು ವಿಶ್ವಾಸಾರ್ಹವಾದ ಮಾಹಿತಿಯೊಂದಿಗೆ ಕಾರ್ಯಕ್ರಗಳನ್ನು ರೂಪಿಸುವುದಕ್ಕೆ ಇನ್ನು ಹಲವು ವರ್ಷಗಳು ಕಾಯಬೇಕಿದೆ.
ಕ್ಷಯರೋಗದಂಥಾ ಪ್ರಾಣಾಂತಿಕ ಮತ್ತು ಸಾಂಕ್ರಾಮಿಕ ಸ್ವರೂಪವುಳ್ಳ ರೋಗವನ್ನು ನಿಯಂತ್ರಿಸಲು ಬೇಕಾದ ಹೊಸ ರೋಗಪತ್ತೆ ವಿಧಾನ ಮತ್ತು ತಂತ್ರಜ್ನಾಗಳ, ಹೊಸ ವ್ಯಾಕ್ಸಿನ್‌ಗಳ ಮತ್ತು ಅಲ್ಪಕಾಲಾವಧಿ ಸೀಮಿತ ಔಷಧಿಗಳನ್ನು ಅನ್ವೇಷಣೆ ಮಾಡುವಂಥಾ ಕ್ರಮಗಳು ಕೂಡಾ ಎಚ್‌ಐವಿ/ಏಡ್ಸ್ ನಂಥಾ ರೋಗಗಳಿಗೆ ಹೋಲಿಸಿದಲ್ಲಿ ತುಂಬ ನಿಧಾನಗತಿಯಲ್ಲಿವೆ. ಸುಮಾರು ೪೦ ವರ್ಷಗಳ ತರುವಾಯವಷ್ಟೆ ಬೆಡಾಕ್ವಿಲೀನ್ ಮತ್ತು ಡೆಲಾಮನೀಡ್ ಎಂಬ ಬಹುಔಷಧ ನಿರೋಧಕ ಕ್ಷಯರೋಗವನ್ನು ಗುಣಪಡಿಸುವ ಎರಡು ಔಷಧಿಗಳನ್ನು ಲಭ್ಯಗೊಳಿಸಲಾಗಿದೆ. ಹಾಗೆಯೇ ಈ ರೋಗವು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಹರಡದಂತೆ ತಡೆಗಟ್ಟಬಲ್ಲ ಔಷಧವೊಂದು ತೀರಾ ಅಗತ್ಯವಿದೆ. ಹೊಸ ಔಷಧದ ಬಗೆಗಿನ ಸಂಶೋಧನೆ, ಅಭಿವೃದ್ಧಿ, ಪ್ರಯೋಗ ಮತ್ತು ಅಂತಿಮವಾಗಿ ಆ ಹೊಸ ವಿಧಾನ ಮತ್ತು ಔಷಧಿಗಳು ವಾಸ್ತವದಲ್ಲಿ ಬಳಕೆಗೆ ಬರಲು ಹಲವಾರು ವರ್ಷಗಳಾಗುತ್ತವೆ ಮತ್ತು ಕೆಲವೊಮ್ಮೆ ದಶಕಗಳೇ ಬೇಕಾಗುತ್ತದೆ. ಭಾರತದಂಥಾ ಕ್ಷಯರೋಗ ಪೀಡಿತ ದೇಶಗಳ ನೇತೃತ್ವದಲ್ಲಿ ಜಾಗತಿಕ ಸಮುದಾಯವು ಈ ಕೂಡಲೇ ಕಾರ್ಯಪ್ರವೃತ್ತರಾಗದಿದ್ದಲ್ಲಿ ೨೦೩೦ರೊಳಗೆ ಕ್ಷಯರೋಗವನ್ನು ನಿರ್ಮೂಲನೆಮಾಡುವ ಗುರಿಯನ್ನು ಖಂಡಿತಾ ಮುಟ್ಟಲಾಗುವುದಿಲ್ಲ.